ಕನ್ನಡದಲ್ಲಿ ಭೋಲಾರಾಮ್ ಆತ್ಮದ ಸಾರಾಂಶ - Bholaram ka Jeev Summary in Kannada: ಲಕ್ಷಾಂತರ ವರ್ಷಗಳಿಂದ ಧರ್ಮರಾಜರು ಕರ್ಮ ಮತ್ತು ಶಿಫಾರಸ್ಸಿನ ಆಧಾರದ ಮೇಲೆ ಸ್ವರ್ಗ ಮತ್ತು ನರಕ
ಕನ್ನಡದಲ್ಲಿ ಭೋಲಾರಾಮ್ ಆತ್ಮದ ಸಾರಾಂಶ - Bholaram ka Jeev Summary in Kannada
ಲಕ್ಷಾಂತರ ವರ್ಷಗಳಿಂದ ಧರ್ಮರಾಜರು ಕರ್ಮ ಮತ್ತು ಶಿಫಾರಸ್ಸಿನ ಆಧಾರದ ಮೇಲೆ ಸ್ವರ್ಗ ಮತ್ತು ನರಕದ ನಿವಾಸಗಳನ್ನು ಖಾಲಿ ಮಾಡ್ತಾನೇ ಇದರೂ, ಈ ರೀತಿಯ ಅನುಭವ ಅವರಿಗೆಂದೂ ಆಗಿರಲೇ ಇಲ್ಲ. ಎದುರಿಗೆ ಕುಳಿತಿದ್ದ ಚಿತ್ರಗುಪ್ತರು ಮೇಲಿಂದ ಮೇಲೆ ರಿಜಿಸ್ಟರ್ ಅನ್ನು ನೋಡುತ್ತಲೇ ಇದಾರೆ, ಸುಸ್ತಾಗಿ ಕೊನೆಗೆ ಹೇಳ್ತಾರೆ 'ಮಹಾರಾಜರೇ, ದಾಖಲೆ ಎಲ್ಲಾ ಸರಿಯಾಗಿಯೇ ಇದೆ. ಭೋಲಾರಾಮನು ಐದು ದಿನಗಳ ಮೊದಲೇ ಶರೀರವನ್ನು ತ್ಯಾಗ ಮಾಡಿದಾನೆ. ಅವನ ಆತ್ಮವನ್ನು ಕರೆತರಲು ಯಮದೂತನೊಬ್ಬ ಐದು ದಿನಗಳ ಮೊದಲೇ ಭೂಮಿಗೆ ತೆರಳಿದವನು ಇನ್ನೂ ಬಂದಿಲ್ಲ.
ಧರ್ಮರಾಜರು ಕೇಳುತ್ತಾರೆ 'ಆ ಯಮದೂತನು ಎಲ್ಲಿ?'
ಚಿತ್ರಗುಪ್ತ 'ಮಹಾರಾಜರೇ, ಅವನೂ ಕಾಣೆಯಾಗಿದ್ದಾನೆ'
ಅದೇ ಸಮಯಕ್ಕೆ ನರಕದ ಬಾಗಿಲು ತೆರೆದು ಗಾಬರಿಯಿಂದ ಯಮದೂತನೊಬ್ಬ ಒಳಬಂದು ಹೇಳುತ್ತಾನೆ. 'ಮಹಾರಾಜರೇ, ಭೋಲಾರಾಮನ ಆತ್ಮವನ್ನು ತರಲು ಹೋಗಿದ್ದುದು ನಾನೇ. ಆದರೆ, ರಸ್ತೆಯಲ್ಲಿ ಅದ್ಯಾವುದೋ ಮಾಯೆಯಲ್ಲಿ ನನಗೇ ಚಳ್ಳೆಹಣ್ಣು ತಿನ್ನಿಸಿ ಆತ್ಮ ಓಡಿಹೋಗಿದೆ. ಇದುವರೆಗೂ ನನ್ನಿಂದ ಇಂತಹ ಪ್ರಮಾದ ನಡೆದಿಲ್ಲ. ನಾನು ಇಡೀ ಬ್ರಹ್ಮಾಂಡವನ್ನೆಲ್ಲಾ ಹುಡುಕಿದೆ, ಆದರೆ ಅವನ ಪತ್ತೆಯಾಗಲಿಲ್ಲ'.
ಚಿತ್ರಗುಪ್ತರು ಹೇಳುತ್ತಾರೆ 'ಮಹಾರಾಜರೇ, ಈಚೀಚೆಗೆ ಭೂಮಿಯಲ್ಲಿ ಇಂತಹ ಚಮತ್ಕಾರಗಳು ಬಹಳವಾಗಿಬಿಟ್ಟಿವೆ ಸ್ವಾಮೀ, ಜನ ಪಾರ್ಸೆಲಿನಲ್ಲಿ ವಸ್ತುಗಳನ್ನು ಕಳುಹಿಸುತ್ತಾರೆ, ಆದರೆ ಮಧ್ಯದಲ್ಲಿಯೇ ಅವನ್ನು ಮಾಯ ಮಾಡಲಾಗುತ್ತೆ. ಹೊಸೈರಿಯ ಪಾರ್ಸೆಲ್‌ಗಳಲ್ಲಿ ಬರುವ ಕಾಲುಚೀಲಗಳು ರೇಲ್ವೆ ಅಧಿಕಾರಿಗಳ ಪಾಲಾಗುತ್ತೆ. ಮಾಲುಗಾಡಿಯ ಡಬ್ಬಾಗಳನ್ನು ರಸ್ತೆಯಲ್ಲಿಯೇ ಕತ್ತರಿಸಲಾಗುತ್ತೆ, ರಾಜಕೀಯ ಪಕ್ಷಗಳ ಮುಖಂಡರುಗಳು ವಿರೋಧ ಪಕ್ಷಗಳ ಮುಖಂಡರುಗಳನ್ನು ಹಾರಿಸಿಕೊಂಡು ಹೋಗಿ ಬಚ್ಚಿಡುತ್ತಾರೆ. ಹೀಗೇ ಭೋಲಾರಾಮನ ಆತ್ಮವನ್ನೂ ವಿರೋಧ ಪಕ್ಷದವರು ಯಾರಾದರೂ ಹಾರಿಸಿಕೊಂಡು ಹೋಗಿರಬಹುದೇನೋ'.
ಧರ್ಮರಾಜರು ಚಿತ್ರಗುಪ್ತನೆಡೆಗೆ ನೋಡಿ ವ್ಯಂಗ್ಯವಾಗಿ ನಕ್ಕು ಹೇಳುತ್ತಾರೆ 'ಚಿತ್ರಗುಪ್ತರೇ, ಬಹುಷ: ನಿಮಗೆ ವಯಸ್ಸಾಗಿಬಿಟ್ಟಿದೆ. ನಿವೃತ್ತಿಯ ಸಮಯ ಹತ್ತಿರ ಬರ್ತಾ ಇದೆ ಅಂತ ಕಾಣುತ್ತೆ, ಭೋಲಾರಾಮನಂತಹ ನಿರುಪದ್ರವಿ ವ್ಯಕ್ತಿಯಿಂದ ಯಾರಿಗೇನು ಕೊಡು-ತಗೆದುಕೊಳ್ಳುವುದಿದೆ? ಅವನನ್ನು ಯಾಕೆ ಯಾರಾದರೂ ಅಪಹರಿಸುತ್ತಾರೆ?'
ಅದೇ ಸಮಯಕ್ಕೆ ನಾರದರು ಅಲ್ಲಿಗೆ ಬರುತ್ತಾರೆ. ಗಂಭೀರವದನರಾಗಿ ಆಸೀನರಾಗಿದ್ದ ಯಮರಾಜರನ್ನು ಕಂಡು ಕೇಳುತ್ತಾರೆ 'ಏನು ಯಮರಾಜ, ನರಕದಲ್ಲಿ ನಿವಾಸಸ್ಥಾನದ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲವೇ?'
ಧರ್ಮರಾಜ 'ಅವೆಲ್ಲಾ ಎಂದೋ ನಿವಾರಣೆಯಾಗಿದೆ ಸ್ವಾಮಿ. ಅಪ್ರಮಾಣಿಕರು, ಕಳ್ಳರು, ಸುಳ್ಳರು, ಠೇಕೇದಾರರು ಎಲ್ಲರೂ ನರಕಕ್ಕೆ ಬಂದು ಅವರುಗಳಿಗೆ ಸರಿಯಾದ ಸ್ಥಾನಗಳನ್ನೂ ಕಲ್ಪಿಸಿಯಾಗಿದೆ. ಈಗ ಹೊಸ ಸಮಸ್ಯೆಯೊಂದು ಉದ್ಭವವಾಗಿದೆ. ಭೋಲಾರಾಮ್ ಎನ್ನುವ ವ್ಯಕ್ತಿಯೊಬ್ಬ ಐದು ದಿನಗಳ ಹಿಂದೆ ಪ್ರಾಣತ್ಯಗ ಮಾಡಿದ್ದ. ಅವನ ಆತ್ಮವನ್ನು ತರಲು ಯಮದೂತನನ್ನೂ ಕಳುಹಿಸಲಾಗಿತ್ತು. ಆದರೆ ಆ ಭೋಲಾರಾಮನ ಆತ್ಮವು ದಾರಿಯಲ್ಲಿ ನಮ್ಮ ಯಮದೂತನಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿಬಿಟ್ಟಿದೆ.
ನಾರದರು ಅವನ ಮೇಲೆ ಆದಾಯ ತೆರಿಗೆ ಬಾಕಿ ಏನಾದರೂ ಉಳಿದಿದೆಯೇ?
ಧರ್ಮರಾಜ 'ಛೇ, ಛೇ, ಅವನು ತುಂಬಾ ಬಡವ, ಆದಾಯ ತೆರಿಗೆ ವ್ಯಾಪ್ತಿಗೆ ಬರುವವನೇ ಅಲ್ಲ.
ಈ ಮಾತಿಗೆ ಚಿತ್ರಗುಪ್ತರೂ ಹೌದೆಂದು ತಲೆಯಲ್ಲಾಡಿಸುತ್ತಾ ನಗುತ್ತಾರೆ.
ನಾರದರು 'ಸರಿ ಹಾಗಾದ್ರೆ, ನನಗೆ ಅವನ ವಿಳಸವನ್ನು ಕೊಡಿ, ನಾನು ಪೃಥ್ವಿಗೆ ಹೋಗಿ ಅವನನ್ನು ಹುಡುಕಿ ತರುತ್ತೇನೆ”
ಚಿತ್ರಗುಪ್ತ ಅವನ ಪರಿವಾರದಲ್ಲಿ ಹೆಂಡತಿ, ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮಗಳಿದ್ದಾಳೆ, ಅವರುಗಳು ಪೃಥ್ವಿಯ ಘಮಾಪುರ ಮೊಹಲ್ಲಾದಲ್ಲಿನ ಕಾಲುವೆಯ ದಂಡೆಯ ಮೇಲಿರುವ ಒಂದೂವರೆ ರೂಮಿನ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಭೋಲಾರಾಮ ಐದು ವರ್ಷಗಳ ಕೆಳಗೆ ಸರಕಾರಿ ನೌಕರಿಯಿಂದ ನಿವೃತ್ತಿ ಹೊಂದಿದ್ದಾನೆ. ವಯಸ್ಸು ಸುಮಾರು ಅರವತ್ತು ವರ್ಷ. ಕಳೆದ ಐದು ವರ್ಷಗಳಿಂದಲೂ ಪಿಂಚಣಿಗಾಗಿ ಸರಕಾರಿ ಕಚೇರಿಗಳನ್ನು ಎಡತಾಕುತ್ತಲೇ ಇದ್ದ. ಆದರೆ ಇಲ್ಲಿಯವರೆಗೂ ಅವನ ಕೆಲಸವಾಗಿರಲಿಲ್ಲ. ಕಳೆದ ಒಂದು ವರ್ಷದಿಂದ ಮನೆಯ ಬಾಡಿಗೆಯನ್ನೂ ಕಟ್ಟಿರಲಿಲ್ಲ. ಬಹುಷ: ಅವನ ಮರಣದ ನಂತರ ಮನೆಯ ಮಾಲೀಕ ಅವನ ಪರಿವಾರದವರನ್ನು ಅಲ್ಲಿಂದ ಬಿಡಿಸಿರಬಹುದು. ಹಾಗಾಗಿ ಅವನ ಪರಿವಾರದವರನ್ನು ಹುಡುಕುವುದು ನಿಮಗೆ ಕಷ್ಟವಾಗಬಹುದು'.
ನಾರದರು ಪೃಥ್ವಿಗೆ ಬಂದಿಳಿದಾಗ ತಾಯಿ-ಮಕ್ಕಳ ಆಕ್ರಂದನದ ಜಂಟಿ ಧ್ವನಿಯನ್ನು ಕೇಳಿಯೇ ಊಹಿಸಿದ್ರು ಇದು ಭೋಲಾರಾಮನ ಮನೆಯೇ ಇರಬೇಕೆಂದು. ನಾರದರನ್ನು ನೋಡಿ ಮಗಳು ತಿಳಿದಳು ಯಾರೋ ವೇಷಧಾರಿ ಭಿಕ್ಷುಕ ಬಂದಿರಬೇಕೆಂದು. ನಾರದರು ಹೇಳುತ್ತಾರೆ, ಮಗೂ ನನಗೆ ಭಿಕ್ಷೆಯೇನೂ ಬೇಡ. ಭೋಲಾರಾಮನ ಬಗ್ಗೆ ಏನಾದರೂ ಮಾಹಿತಿಯಿದ್ದರೆ ಕೊಡಿ.
ಹುಡುಗಿಯ ತಾಯಿ ಹೇಳಿದಳು. ಅವರಿಗೆ ಬಡತನದ ಕಾಯಿಲೆ ಇತ್ತು. ಕಳೆದ ಐದು ವರ್ಷಗಳಿಂದ ಪಿಂಚಣಿಗಾಗಿ ಓಡಾಡ್ತಾ ಇದ್ರು, ಆದರೆ ಅವರ ಎಲ್ಲ ಮನವಿಗಳಿಗೂ ಒಂದೇ ಉತ್ತರ ಬರ್ತಾ ಇತ್ತು 'ಪಿಂಚಣಿ ಬಗ್ಗೆ ವಿಚಾರ ಮಾಡಲಾಗಿದೆ' ಎಂದು. ಈ ಐದು ವರ್ಷಗಳಲ್ಲಿ ಮನೆಯಲ್ಲಿನ ಎಲ್ಲ ಒಡವೆಗಳನ್ನೂ ಹೊಟ್ಟೆಪಾಡಿಗಾಗಿ ಮಾರಿದೀವಿ. ಪಾತ್ರೆಗಳನ್ನೂ ಮಾರಿಯಾಯ್ತು. ಈಗ ಏನೂ ಉಳಿದಿಲ್ಲ. ಇನ್ನು ಉಪವಾಸವೇ ಗತಿ ನಮಗೆ ಅನ್ನೋ ಚಿಂತೆಯಲ್ಲಿಯೇ ಅವರು ಪ್ರಾಣ ಬಿಟ್ಟಿತ್ತು. ನಾರದರು ಹೇಳುತ್ತಾರೆ “ಏನು ಮಾಡೋದು, ಅವರ ಆಯುಷ್ಯ ಇದ್ದದ್ದೇ ಅಷ್ಟು'. ಆದರೆ ಭೋಲಾರಾಮನ ಪತ್ನಿ ಅದನ್ನು ಒಪ್ಪಿಕೊಳ್ಳಲಿಲ್ಲ. ಪಿಂಚಣಿ ಸಿಕ್ಕಿದ್ದರೆ ಇನ್ನಷ್ಟು ವರ್ಷ ಅವರು ಬದುಕಿರುತ್ತಿದ್ದರು ಎಂಬುದೇ ಅವಳ ನಂಬಿಕೆ.
ನಂತರ ನಾರದರು ಅಸಲೀ ವಿಷಯಕ್ಕೆ ಬಂದರು. 'ಭೋಲಾರಾಮನಿಗೇನಾದರೂ ಬೇರೆ ಹೆಣ್ಣಿನಲ್ಲಿ ಆಸಕ್ತಿಯಿದ್ದಿತ್ತೇ? ಯಾಕೆ ಕೇಳ್ತಿದೀನಿ ಅಂದ್ರೆ, ಅವನ ಆತ್ಮ ಯಮಲೋಕವನ್ನಿನ್ನೂ ತಲುಪಿಲ್ಲ.
ಹೆಂಡತಿ ಹೇಳ್ತಾಳೆ 'ಇಲ್ಲ ಮಹಾರಾಜ್. ನನ್ನ ಪತಿ ಬೇರೆ ಸ್ತ್ರೀಯನ್ನು ಕಣ್ಣಿಂದ ಕೂಡಾ ನೋಡೋರಲ್ಲ. ತಾವು ಸಿದ್ಧಪುರುಷರಂತೆ ಕಾಣುತ್ತೀರ. ನಿಂತು ಹೋಗಿರುವ ಅವರ ಪಿಂಚಣಿ ಸಿಗುವಂತೆ ಏನಾದರೂ ಮಾಡುತ್ತೀರಾ?
ನಾರದರಿಗೆ ಅವರ ಬಗ್ಗೆ ದಯೆಯುಂಟಾಯಿತು. ಹೇಳ್ತಾರೆ, ಈ ದಿನಗಳಲ್ಲಿ ಸಾಧುಗಳ ಮಾತನ್ನು ಯಾರು ಕೇಳ್ತಾರೆ ತಾಯಿ. ಮತ್ತೆ ನಾನು ಯಾವುದೇ ಮಂದಿರ ಅಥವಾ ಮಠದ ಮಹಾಂತನೇನೂ ಅಲ್ಲ. ನನ್ನ ಮಾತನ್ನು ಯಾರು ಕೇಳ್ತಾರೆ? ಆದರೂ ನಾನು ಸರ್ಕಾರಿ ಕಚೇರಿಗೆ ಹೋಗಿ ಪ್ರಯತ್ನವನ್ನಂತೂ ಮಾಡ್ತೀನಿ.
ಸರಕಾರಿ ಕಚೇರಿ ತಲುಪಿದ ನಾರದರು ಭೋಲಾರಾಮನ ಪಿಂಚಣಿಯ ಬಗ್ಗೆ ವಿಚಾರಿಸಿದಾಗ, ಈ ಟೇಬಲ್ಲಿನಿಂದ ಆ ಟೇಬಲ್ಲಿಗೆ, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಂದು ಹಲವಾರು ಬಾರಿ ಓಡಾಡಿಸಿದರೇ ಹೊರತು ಕೆಲಸವೇನೂ ಆಗಲಿಲ್ಲ. ಕೊನೆಗೂ ಒಬ್ಬ ಕ್ಲರ್ಕ್ ಹೇಳ, ಅವರ ವಿನಂತಿಯೇನೋ ಬಂದಿತ್ತು. ಆದರೆ ಅದರ ಮೇಲೆ ಭಾರವನ್ನೇನೂ ಇಟ್ಟಿರಲಿಲ್ಲ. ಅದಕ್ಕೇ ಆ ಅರ್ಜಿ ಹಾರಿಹೋಯ್ತು, ಚಪರಾಸಿ ಹೇಳ 'ಸಾಧು ಮಹಾರಾಜರೇ, ನೀವು ಯಾಕೆ ಈ ಗೊಂದಲದಲ್ಲಿ ಸಿಕ್ಕಿಹಾಕಿಕೊಂಡಿರಿ? ನೀವು ಸೀದಾ ದೊಡ್ಡ ಸಾಹೇಬರನ್ನ ಭೇಟಿಯಾಗಿರಿ.
ನಾರದರು ಸೀದಾ ದೊಡ್ಡ ಸಾಹೇಬರ ರೂಮಿನೊಳಗೆ ಪ್ರವೇಶಿಸಿದ್ರು ಏಕೆಂದರೆ, ಅವರ ಚಪರಾಸಿ ಕುಳಿತೇ ನಿದ್ದೆ ಮಾಡ್ತಾ ಇದ್ದ. ಸಾಹೇಬರು ಹೇಳುತ್ತಾರೆ ನೀವು ನೋಡಿದ್ರೆ ಬೈರಾಗಿಯಂತೆ ಕಾಣ್ಣೀರಿ, ಕಚೇರಿಗಳ ರೀತಿ-ರಿವಾಜು ಗೊತ್ತಿಲ್ಲ ಅಂತ ಕಾಣುತ್ತೆ. ಇಲ್ಲೂ ಕೂಡಾ ದಾನ-ಪುಣ್ಯಕಾರ್ಯ ಮಾಡಬೇಕಾಗುತ್ತೆ. ನೀವು ಭೋಲಾರಾಮನ ಆತ್ಮೀಯರಂತೆ ಕಾಣೀರ. ಭೋಲಾರಾಮನ ಅರ್ಜಿಗಳು ಹಾರಿ ಹೋಗ್ತಾ ಇವೆ. ಅದರ ಮೇಲೆ ಸ್ವಲ್ಪ ಭಾರ ಇಡಿ.
ನಾರದರಿಗೆ ಕೊನೆಗೆ ತಮ್ಮ ವೀಣೆಯನ್ನೇ ಅರ್ಜಿಯ ಮೇಲೆ ಇಡಬೇಕಾಗುತ್ತೆ. ಈಗ ಸಾಹೇಬರು ತಕ್ಷಣ ಭೋಲಾರಾಮನ ಫೈಲ್ ತರುವಂತೆ ಹೇಳುತ್ತಾರೆ. ಭೋಲಾರಾಮನ ಆತ್ಮ ಅದೇ ಫೈಲಿನಲ್ಲಿ ಅಡಗಿಕೊಂಡಿರುತ್ತೆ. ಹೇಳುತ್ತೆ ನನ್ನನ್ನು ಯಾರು ಕೂಗ್ತಾ ಇದಾರೆ? ಪೋಸ್ಟ್ ಮ್ಯಾನ್? ಓಹ್! ನನ್ನ ಪೆನ್ನನ್ ಆರ್ಡರ್ ಬಂತಾ?
ನಾರದರು ಹೇಳ್ತಾರೆ 'ನಾನು ನಾರದ. ನಿನ್ನನ್ನು ಕರೆದುಕೊಂಡು ಹೋಗಲು ಬಂದಿರುವೆ. ನಡಿ, ಸ್ವರ್ಗದಲ್ಲಿ ಎಲ್ಲರೂ ನಿನ್ನನ್ನು ನಿರೀಕ್ಷಿಸುತ್ತಿದ್ದಾರೆ'. ಭೋಲಾರಾಮ ಹೇಳುತ್ತಾನೆ 'ನಾನು ಅಲ್ಲಿಗೆ ಬರೋಲ್ಲ. ನಾನು ನನ್ನ ಪೆನ್ನನ್ ಅಪ್ಲಿಕೇಶನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವೆ. ನನ್ನ ಮನಸ್ಸೆಲ್ಲಾ ಇದರಲ್ಲಿಯೇ ಇದೆ. ಇದನ್ನು ಬಿಟ್ಟು ನಾನು ಬರೋಕೆ ಆಗೋಲ್ಲ, ಬರೋಕೆ ಆಗೋಲ್ಲ.
COMMENTS