Tuesday, 17 March 2020

ಅರಣ್ಯ ಮತ್ತು ಅದರ ಸಂರಕ್ಷಣೆ ಪ್ರಬಂಧ Aranya Samrakshane Essay in Kannada Language

Aranya Samrakshane Essay in Kannada Language: In this article, we are providing ಅರಣ್ಯ ಮತ್ತು ಅದರ ಸಂರಕ್ಷಣೆ ಪ್ರಬಂಧ for students and teachers. Students can use this Aranya Samrakshane Essay in Kannada Language to complete their homework.

ಅರಣ್ಯ ಮತ್ತು ಅದರ ಸಂರಕ್ಷಣೆ ಪ್ರಬಂಧ Aranya Samrakshane Essay in Kannada Language

ಕಾಡಿನ ವಿಸ್ತೀರ್ಣ
ಗಿಡ, ಮರ, ಬಳ್ಳಿ ಮುಂತಾದ ಸಸ್ಯ ಸಮುದಾಯವಿರುವ ಪ್ರದೇಶವನ್ನು ಕಾಡು ಅಥವಾ ಅರಣ್ಯ ಎನ್ನುತ್ತೇವೆ. ಸಸ್ಯಗಳೊಂದಿಗೆ ಸಹಬಾಳ್ವೆ ನಡೆಸುವ ಕ್ರಿಮಿ, ಕೀಟ, ಪಕ್ಷಿ, ಪ್ರಾಣಿ-ಎಲ್ಲವೂ ಕಾಡಿಗೆ ಸೇರಿದವು. ನಾಗರಿಕತೆ ಬೆಳೆದಂತೆ ಕಾಡುಗಳು ನಾಶವಾಗತೊಡಗಿದವು. ಇಂದು ಭೂನೆಲದ ಸುಮಾರು ಮೂರರಲ್ಲಿ ಒಂದು ಪಾಲು ವಿಸ್ತೀರ್ಣ ಕಾಡು ಹರಡಿದೆ. ಭಾರತದಲ್ಲಿ ಒಟ್ಟು ವಿಸ್ತೀರ್ಣದ ಶೇಕಡ ಇಪ್ಪತ್ತೆರಡರಷ್ಟು ಕಾಡು ಪ್ರದೇಶವಿದೆ. ಕರ್ನಾಟಕದಲ್ಲಿ ಶೇಕಡ ಹದಿನೆಂಟರಷ್ಟು ಇದೆ.

ಕಾಡುಗಳ ವರ್ಗಿಕರಣ
ಭೌಗೋಳಿಕ ಸ್ಥಿತಿ, ಮಣ್ಣು ಮತ್ತು ಋತುಭೇದ ಇತ್ಯಾದಿ ಕಾರಣಗಳಿಂದ ಉಂಟಾಗುವ ಹವಾಗುಣಗಳು ಅರಣ್ಯದ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಪ್ರಪಂಚದ ಕಾಡುಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು.
1) ಶಂಕು ವೃಕ್ಷಗಳ ಕಾಡುಗಳು. ಇವು ತುಂದ್ರಾ ಪ್ರದೇಶದಿಂದ ದಕ್ಷಿಣಕ್ಕೆ ತಂಪು ಹವೆ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ. ಫರ್, ಪೈನ್ ಮರಗಳು ಈ ಅರಣ್ಯದಲ್ಲಿವೆ.
2) ಸಮಶೀತೋಷ್ಣ ಪ್ರದೇಶದಲ್ಲಿರುವ ಕಾಲ ಕಾಲಕ್ಕೆ ಎಲೆಯುದುರುವ ಮರಗಳಿರುವ ಕಾಡುಗಳು ಓಕ್, ಎಲ್ಫ್ ದೇವದಾರು ಮೊದಲಾದ ಮರಗಳು ಇಲ್ಲಿ ಬೆಳೆಯುತ್ತವೆ
3) ಉಷ್ಣವಲಯದಲ್ಲಿ ಹಬ್ಬಿರುವ ಕಾಲಕಾಲಕ್ಕೆ ಎಲೆ ಉದುರುವ ಮರಗಳಿರುವ ಕಾಡುಗಳು ಭಾರತ, ಬರ್ಮಗಳಲ್ಲಿ ಇಂಥ ಕಾಡುಗಳಿವೆ. ಉತ್ತರ ಅಮೆರಿಕಾದಲ್ಲಿ ಶಂಕು ವೃಕ್ಷಗಳ ಆಕರ್ಷಕ ಕಾಡುಗಳಿವೆ. ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ನದಿ ಪ್ರದೇಶಗಳಲ್ಲಿ ಅತಿ ನಿಬಿಡವಾದ ಉಷ್ಣವಲಯದ ಕಾಡುಗಳಿವೆ.

ಅರಣ್ಯಗಳ ಉಪಯೋಗ
ಕಾಡುಗಳು ಮಳೆ ಬೀಳಲು ಸಹಾಯಕವಾಗಿವೆ. ಗಾಳಿಯ ಹೊಡೆತ, ನೀರಿನ ಕೊರತೆಗಳಿಂದ ರಕ್ಷಿಸಿ ಮಣ್ಣಿನ ಫಲವತ್ತತೆಯನ್ನು ಅರಣ್ಯಗಳು ರಕ್ಷಿಸುತ್ತವೆ. ನೆಲದಲ್ಲಿ ನೀರಿನ ತೇವ ಬೇಗ ಆರದಂತೆ ಮಾಡುತ್ತವೆ. ಸುತ್ತಲಿನ ಪ್ರದೇಶದ ಹವಾಗುಣದ ಮೇಲೆ ಪ್ರಭಾವ ಬೀರುತ್ತವೆ. ಬೇರೆ ಬೇರೆ ಕಾರಣಗಳಿಂದ ಭೂಮಿಯಲ್ಲಿ ಹುದುಗಿಹೋದ ಅರಣ್ಯಗಳು ಕಾಲಾಂತರದಲ್ಲಿ ಕಲ್ಲಿದ್ದಲು, ಕಲ್ಲೆಣ್ಣೆಗಳಂಥ ಇಂಧನವಾಗಿ ಮಾರ್ಪಡುತ್ತವೆ. ಅನೇಕ ಸಸ್ಯಜನ್ಯ ತೈಲಗಳು ಅರಣ್ಯದಿಂದ ದೊರೆಯುತ್ತವೆ. ಕಾಗದ, ಗಂಧದ ಎಣ್ಣೆ ಅರಗು, ಕರ್ಪೂರದಂತಹ ದ್ರವ್ಯಗಳ ಕೈಗಾರಿಕೆಗಳಿಗೆ ಕಾಡುಗಳು ಅತ್ಯಗತ್ಯ. ಬಿದಿರು, ಮರಮುಟ್ಟು, ಗೋಂದು, ರಾಳ, ಸಾಂಬಾರ ಜಿನಿಸು ಇತ್ಯಾದಿ ಜೀವನೋಪಯೋಗಿ ವಸ್ತುಗಳು, ಚರ್ಮ, ದಂತ, ಮಾಂಸ ಇತ್ಯಾದಿ ಅರಣ್ಯವಾಸಿ ಪ್ರಾಣಿಗಳಿಂದ ದೊರೆಯುತ್ತವೆ.

ಅರಣ್ಯ ಸಂರಕ್ಷಣೆ
ಅರಣ್ಯಗಳ ಸಂರಕ್ಷಣೆ ಅತಿ ಮುಖ್ಯವಾದುದು. ಬೀಳಬಹುದಾದ ಮರಗಳನ್ನು ಗುರುತಿಸಿ ಅದನ್ನು ಕಡಿದು ಅದರ ಜಾಗದಲ್ಲಿ ಉಪಯೋಗಿ ಹೊಸ ಗಿಡಗಳನ್ನು ನೆಡಬೇಕು. ಆರಿಸಿದ ಗಿಡಗಳಿಲ್ಲದಿದ್ದರೆ ಆರಿಸಿದ ಬೀಜಗಳನ್ನಾದರೂ ಬಿತ್ತಬೇಕು. ಅರಣ್ಯದಲ್ಲಿ ವಾಸಿಸುವ ಪ್ರಾಣಿಪಕ್ಷಿಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಬೇಟೆಯಾಡಲು ನಿರ್ದಿಷ್ಟ ಜಾಗವನ್ನು ಗೊತ್ತು ಮಾಡುವುದರಿಂದ ಪ್ರಾಣಿಪಕ್ಷಿ ಸಂರಕ್ಷಣೆ ಸಾಧ್ಯವಾಗುತ್ತದೆ. ಕಾಡುಗಳಲ್ಲಿ ಸಸ್ಯಗಳು ಚೆನ್ನಾಗಿ ಬೆಳೆಯುವಂತೆ, ಸುರಕ್ಷಿತವಾಗಿ ಉಳಿಯುವಂತೆ ನೋಡಿಕೊಳ್ಳಬೇಕು. ಕಾಡಿಚ್ಚು ಹರಡದಂತೆ, ಮರಗಳಿಗೆ ರೋಗಗಳು ತಗುಲದಂತೆ ಎಚ್ಚರ ವಹಿಸಬೇಕು.

ಉಪಸಂಹಾರ
ಹೊಸ ಸಸಿಗಳನ್ನು ಸರಿಯಾಗಿ ನೆಡುವುದು, ಗುಡ್ಡ, ದಿನ್ನೆಗಳಲ್ಲಿ ಹೊಸದಾಗಿ ಅರಣ್ಯಗಳನ್ನು ಹಬ್ಬಿಸುವುದು, ಅರಣ್ಯ ಸಂರಕ್ಷಣೆಯ ಕೆಲವು ವಿಧಾನಗಳು.ದನ, ಕುರಿ, ಆಡು, ಚಿಗರೆ ಇತ್ಯಾದಿ ಪ್ರಾಣಿಗಳು ಚಿಕ್ಕ ಗಿಡಗಳ ಎಲೆಗಳನ್ನು ತಿನ್ನದಂತೆ ಕಾಪಾಡಬೇಕು. ಆನೆಗಳು ಗಿಡಗಳನ್ನು ತುಳಿದು ಹಾಳು ಮಾಡಬಹುದು. ಅದರಿಂದ ರಕ್ಷಿಸಲು ಗಿಡಗಳಿಗೆ ಬೇಲಿ, ಇತ್ಯಾದಿ ಕಟ್ಟುವುದು ಒಳ್ಳೆಯದು.
Read also :

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

4 comments: