Monday, 16 March 2020

ಭ್ರಷ್ಟಾಚಾರ ಒಂದು ಸಾಮಾಜಿಕ ಪಿಡುಗು ಪ್ರಬಂಧ Corruption Essay in Kannada Language

Corruption Essay in Kannada Language: In this article, we are providing ಭ್ರಷ್ಟಾಚಾರ ಒಂದು ಸಾಮಾಜಿಕ ಪಿಡುಗು ಪ್ರಬಂಧ for students and teachers. Students can use this Corruption Essay in Kannada Language to complete their homework.

ಭ್ರಷ್ಟಾಚಾರ ಒಂದು ಸಾಮಾಜಿಕ ಪಿಡುಗು ಪ್ರಬಂಧ Corruption Essay in Kannada Language

1.ಭ್ರಷ್ಟಾಚಾರದ ಜಾಲ 2.ಲಂಚದ ಹಾವಳಿ 3.ನೈತಿಕ ಮೌಲ್ಯ 4.ರಾಜಕಾರಣಿಗಳ ಪಾತ್ರ 5. ಉಪಸಂಹಾರ
ಭ್ರಷ್ಟಾಚಾರ ಇಂದು ಸರ್ವವ್ಯಾಪಿಯಾಗಿದೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಶಕ್ತಿ ನನ್ನಲ್ಲಿದೆ ಎಂದು ಭಾರತದ ಯಾವುದೇ ವ್ಯಕ್ತಿ ಹೇಳಲಾಗದಷ್ಟು ಇದರ ಕಬಂಧಬಾಹು ಎಲ್ಲೆಡೆ ಚಾಚಿದೆ. 'ಸರ್ಕಾರ ನೀಡುವ ಒಂದು ರೂಪಾಯಿಯಲ್ಲಿ ಹದಿನೈದು ಪೈಸೆಯಷ್ಟು ಮಾತ್ರ ಸರಿಯಾದ ಜಾಗಕ್ಕೆ ಸರಿಯಾದ ವ್ಯಕ್ತಿಗೆ ತಲುಪುತ್ತದೆ. ಉಳಿದ ಎಂಬತ್ತೈದು ಪೈಸೆ ಮಧ್ಯವರ್ತಿಗಳ ಪಾಲಾಗುತ್ತದೆ' -ಎಂದು ಆಗಿನ ಪ್ರಧಾನ ಮಂತ್ರಿ ರಾಜೀವಗಾಂಧಿ ಹೇಳಿದ ಮಾತುಗಳಿಂದ ನಾವು ಭ್ರಷ್ಟಾಚಾರದ ಜಾಲವನ್ನು ಕಲ್ಪಿಸಿಕೊಳ್ಳಬಹುದು.

ಭಾರತದಲ್ಲಿ ಭ್ರಷ್ಟಾಚಾರ ಇಂದು ಮುಗಿಲುಮುಟ್ಟಿದೆ. ಅನ್ಯಾಯ, ಅತ್ಯಾಚಾರ, ಬಲಾತ್ಕಾರ,ಕಪ್ಪುದಂಧೆ, ಲಂಚ, ಅಪಹರಣ, ಮೋಸ, ವಂಚನೆ ಇತ್ಯಾದಿ ಎಲ್ಲವೂ ಭ್ರಷ್ಟಾಚಾರದ ಇನ್ನೊಂದು ರೂಪವೇ ಆಗಿದೆ. ರಾಜಕೀಯ ಪಕ್ಷಗಳು, ಅಧಿಕಾರಿ ಮತ್ತು ನೌಕರವರ್ಗ, ಜಾತಿ, ವರ್ಗಭೇದವಿಲ್ಲದೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಭ್ರಷ್ಟಾಚಾರದ ಸೋಂಕಿಲ್ಲದೆ ಇಂದು ಯಾವುದೇ ಕೆಲಸ ಆಗುವುದಿಲ್ಲ ಅನ್ನುವಂತಾಗಿದೆ. ಇಂದು ಭ್ರಷ್ಟಾಚಾರ ಶಿಷ್ಟಾಚಾರವಾಗಿದೆ. ಲಂಚತೆಗೆದುಕೊಳ್ಳುವವನು ಇಂದು ದೇಶದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದಾನೆ. ಇದಕ್ಕೆ ಕೊನೆ-ಮೊದಲು ಇಲ್ಲವಾಗಿದೆ. “ಮೋಡವೇ ಹರಿದು ಹೋದರೆ ಹೊಲಿಗೆ ಹಾಕುವುದು ಎಲ್ಲಿ?”

ಇಂದು ನೈತಿಕ ಮೌಲ್ಯ ಭ್ರಷ್ಟಾಚಾರಿಗಳ ಕೈಯಲ್ಲಿ ಸಿಲುಕದೆ ಪ್ರಭಾವಶಾಲಿ ವ್ಯಕ್ತಿ, ಮತ್ತು ಧನಿಕ ವ್ಯಕ್ತಿ ನ್ಯಾಯವನ್ನು ಖರೀದಿಸುವಷ್ಟರ ಮಟ್ಟಿಗೆ ಇಂದು ಭ್ರಷ್ಟಾಚಾರ ಹರಡಿದೆ. ಆಡಳಿತದ ದುರುಪಯೋಗ ಭ್ರಷ್ಟಾಚಾರದ ಮತ್ತೊಂದು ಮಗ್ಗುಲು. ವಿದ್ವಾಂಸ, ಸಜ್ಜನ, ಯೋಗ್ಯ ವ್ಯಕ್ತಿ ಲಂಚ ನೀಡುವುದರ ಮೂಲಕ ತನ್ನ ಗೌರವವನ್ನು ಪ್ರದರ್ಶಿಸುವಂಥ ಪರಿಸ್ಥಿತಿ ಇಂದು ಒದಗಿದೆ.

ಕೋಟಾ, ಪರ್ಮಿಟ್, ರೇಷನ್, ಫಂಡ್, ಲೈಸೆನ್, ಓಟು, ವರ್ಗಾವಣೆ, ಉದ್ಯೋಗ ಇತ್ಯಾದಿ ಭ್ರಷ್ಟಾಚಾರದ ಬಾಗಿಲುಗಳಾಗಿವೆ. ಪಾಕೀಸ್ತಾನದೊಡನೆ ಯುದ್ಧ ಆರಂಭವಾದಾಗ ದೇಶದ ರಹಸ್ಯವನ್ನು ಮಾರಾಟಮಾಡಿ ಶತ್ರುಗಳೊಡನೆ ಕೈಕುಲುಕಿದ ಭ್ರಷ್ಟಾಚಾರಿಗಳ ಸುದ್ದಿ ನಿಜಕ್ಕೂ ಆಘಾತಕಾರಿಯಾದದ್ದು. ಅಂಥವರು ಪ್ರಭಾವಶಾಲಿ ವ್ಯಕ್ತಿಗಳಾಗಿದ್ದರಿಂದ ದೇಶದ್ರೋಹದ ಆಪಾದನೆಯಿಂದ ಪಾರಾದರು. ಇದು ದುರ್ದವ. ಜೀಪ್ ಸ್ಕ್ಯಾಂಡಲ್, ಬೋಫಾರ್ಸ್ ಕಾಂಡ, ಜಮೀನು ಕಬಳಿಕೆ, ಚೀನಿ ಷಡ್ಯಂತ್ರ ಇವೆಲ್ಲವೂ ಭ್ರಷ್ಟಾಚಾರದ ಜಾಲಗಳೇ ಆಗಿದ್ದು ದೇಶಪ್ರೇಮಿಗಳು ತಲೆ ತಗ್ಗಿಸುವಂತಾಗಿದೆ. ಇದಕ್ಕೆ ಮುಖ್ಯ ಕಾರಣ ಸ್ವಾರ್ಥ ಲಾಲಸ, ಹಣಗಳಿಸುವಿಕೆ, ವೈಯಕ್ತಿಕ ಲಾಭಕ್ಕಾಗಿ ಭ್ರಷ್ಟಾಚಾರಿ, ಸಮಾಜ ಹಾಗೂ ದೇಶಕ್ಕೆ ಅಪಾಯಕಾರಿಯಾಗಿದ್ದಾನೆ.

ಭ್ರಷ್ಟಾಚಾರಕ್ಕೆ ಕುಮ್ಮಕ್ಕು ದೊರೆಯುತ್ತಿರುವ ರಾಜಕೀಯ ಮುಖಂಡರಿಂದ, ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಹಣಗಳಿಸುವ ದಂಧೆ ಮಾಡುತ್ತಾ ಸಮಾಜದಲ್ಲಿ ರಾಜಕೀಯ ನೇತಾರ ಎಲ್ಲರ ಗೌರವಕ್ಕೆ ಪಾತ್ರನಾಗುತ್ತಾನೆ. ಚುನಾವಣೆ ಸಮಯದಲ್ಲಿ ಕೈಗಾರಿಕೋದ್ಯಮಿಗಳಿಂದ, ಬಂಡವಾಳ ಶಾಹಿಗಳಿಂದ ಚಂದಾಹಣ ಹೆಸರಿನಲ್ಲಿ ಹಣಕೀಳುವುದು ಇಂದು ಸರ್ವೆಸಾಮಾನ್ಯ ಸಂಗತಿಯಾಗಿದೆ. ಅಶಿಕ್ಷಿತ ಮತದಾರ ರಾಜಕೀಯ ಪುಡಾರಿಗಳು ತೋರಸುವ ಹಣ, ಮದ್ಯ, ಇತ್ಯಾದಿ ಆಮಿಷಕ್ಕೆ ಬಲಿಯಾಗಿ ತನ್ನ ಹಕ್ಕನ್ನು ಮಾರಿಕೊಳ್ಳುತ್ತಿದ್ದಾನೆ.

“ಎಲ್ಲರೂ ಭ್ರಷ್ಟರಾಗಿದ್ದಾರೆ ನೀನಿನ್ನೂ ಏಕೆ ಭ್ರಷ್ಟನಾಗಿಲ್ಲ”-ಎಂದು ನೆಹರೂ ಒಮ್ಮೆ ಸಿಟ್ಟಿನಿಂದ ಕೇಳಿದ್ದುಂಟು. ಕಾಲ್‌ಗರ್ಲ್ ವ್ಯವಹಾರವೂ ಭ್ರಷ್ಟಾಚಾರದ ಒಂದು ಅಂಗವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಶ್ನೆಪತ್ರಿಕೆ ಬಹಿರಂಗಗೊಳ್ಳುವುದು, ಅಂಕಗಳ ಅದಲು ಬದಲಾಗುವುದು ಕುಲಪತಿ ಹುದ್ದೆಗಳೂ ಮಾರಾಟವಾಗುವುದು ಭ್ರಷ್ಟಾಚಾರದ ಜಾಲವನ್ನು ಪರಿಚಯಿಸುತ್ತದೆ.

ಇಂದು ಸಮಾಜದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲವಾಗಿದೆ. ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ ರಕ್ಷಿಸುವವರು ಯಾರು? ಮೊದಲು ಜನರಲ್ಲಿ ನೈತಿಕತೆ ಜಾಗೃತಗೊಳ್ಳಬೇಕು. ಸತ್ಯ, ಅಹಿಂಸೆ ಪ್ರಾಮಾಣಿಕತೆ, ನ್ಯಾಯಪ್ರಿಯತೆ, ಪರೋಪಕಾರ, ಪರಸ್ಪರ ಸಹಕಾರ ಭಾವ ಇತ್ಯಾದಿ ಸದ್ಗುಣಗಳು ಜನರಲ್ಲಿ ಉಂಟಾದರೆ ಭ್ರಷ್ಟಾಚಾರ ಕಮ್ಮಿಯಾಗುತ್ತದೆ. ಭ್ರಷ್ಟಾಚಾರ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು. ಲಂಚ ಕೊಡುವುದು ಮತ್ತು ತೆಗೆದುಕೊಳ್ಳುವುದು ಅಪರಾಧ ಎಂದು ಪರಿಗಣಿಸಬೇಕು. ಹೀಗೆ ಮಾಡುವವರಿಗೆ ಕಾರಾಗೃಹ ಶಿಕ್ಷೆದಂಡ ಇತ್ಯಾದಿ ಶಿಕ್ಷೆಯಾಗಬೇಕು. ಇಂದು ಭ್ರಷ್ಟಾಚಾರ ನಿರ್ಮೂಲನಾ ವಿಭಾಗವೂ ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕಿಕೊಂಡಿರುವುದು ವಿಷಾದನೀಯ. ಸಮಾಜದಲ್ಲಿ ನೈತಿಕ ಮೌಲ್ಯ ಉಂಟಾಗದ ಹೊರತು ಭ್ರಷ್ಟಾಚಾರದ ಬಲಿಷ್ಠ ಬೇರುಗಳು ಸಡಿಲಗೊಳ್ಳಲಾರದು.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: