Tuesday, 14 April 2020

ಬೆಂಗಳೂರು ಬಗ್ಗೆ ಪ್ರಬಂಧ Essay on Bengaluru in Kannada Language

Essay on Bengaluru in Kannada Language: In this article, we are providing ಬೆಂಗಳೂರು ಬಗ್ಗೆ ಪ್ರಬಂಧ for students and teachers. ಬೆಂಗಳೂರು ಇತಿಹಾಸ Students can use this History of Bengaluru in Kannada Language to complete their homework.

ಬೆಂಗಳೂರು ಬಗ್ಗೆ ಪ್ರಬಂಧ Essay on Bengaluru in Kannada Language

ಬೆಂಗಳೂರು ಬಗ್ಗೆ ಪ್ರಬಂಧ Essay on Bengaluru in Kannada Language
ಸಮುದ್ರಮಟ್ಟದಿಂದ ಮೂರು ಸಾವಿರ ಅಡಿ ಎತ್ತರದಲ್ಲಿರುವ ಬೆಂಗಳೂರು ಕರ್ನಾಟಕದ ರಾಜಧಾನಿ. ವೀರಬಲ್ಲಾಳ ದೊರೆ ಒಮ್ಮೆ ಒಂದು ಹಳ್ಳಿಯಲ್ಲಿ ತಂಗಿದ. ಮನೆಯ ಒಡತಿ ತುಂಬ ಬಡವಳು. ದೊರೆಗೆ ಊಟ ಹಾಕಲು ಮನೆಯಲ್ಲಿ ಏನೂ ಇಲ್ಲ. ಬೆಂದಕಾಳುಗಳನ್ನಷ್ಟೇ ನೀಡಿದಳು. ಅಂದಿನಿಂದ ಆ ಹಳ್ಳಿಗೆ 'ಬೆಂದಕಾಳೂರು' ಎಂದೇ ಹೆಸರಾಯಿತು. ಕ್ರಮೇಣ 'ಬೆಂಗಳೂರು' ಎಂದಾಯಿತು. ಇದು ಬೆಂಗಳೂರಿನ ಹುಟ್ಟನ್ನು ಕುರಿತ ಒಂದು ಕಿಂವದಂತಿ.
1537ರಲ್ಲಿ ಪಾಳಯಗಾರ ಕೆಂಪೇಗೌಡ ವಿಜಯನಗರದ ದೊರೆ ಅಚ್ಯುತರಾಯನಿಂದ ಒಪ್ಪಿಗೆ ಪಡೆದು ಇಂದಿನ ಬೆಂಗಳೂರು ಕೋಟೆ ಇರುವಲ್ಲಿ ಒಂದು ಮಣ್ಣಿನ ಕೋಟೆಯನ್ನು ಕಟ್ಟಿಸಿದ. ಅಲ್ಲದೆ ನಾಲ್ಕೂ ದಿಕ್ಕುಗಳಲ್ಲಿ ಗೋಪುರಗಳನ್ನು ನಿರ್ಮಿಸಿದ. ಅನೇಕ ದೇವಾಲಯಗಳನ್ನು ಕಟ್ಟಿಸಿದ. ಗವಿಗಂಗಾಧರೇಶ್ವರ, ಕೋಟೆ ವೆಂಕಟರಮಣಸ್ವಾಮಿ ದೇವಾಲಯ ಮತ್ತು ಬಸವನಗುಡಿ ಪ್ರಮುಖವಾದವು. ಕೆಂಪಾಂಬುಧಿಕೆರೆಯೂ ಇವನ ಕಾಲದ್ದೇ.


ಬೆಂಗಳೂರು 17ನೆಯ ಶತಮಾನದಲ್ಲಿ ಸ್ವಲ್ಪ ಕಾಲ ಬಿಜಾಪುರದ ಸುಲ್ತಾನನ ವಶದಲ್ಲಿತ್ತು. ಅನಂತರ ಶಿವಾಜಿಯ ತಂದೆ ಷಹಾಜಿ ಅದನ್ನು ಸ್ವಾಧೀನ ಪಡಿಸಿಕೊಂಡ. 1758ರಲ್ಲಿ ಇದು ಹೈದರಾಲಿಯ ವಶಕ್ಕೆ ಬಂದಿತು. ಅವನು ಮಣ್ಣಿನ ಕೋಟೆಯನ್ನು ಕಡವಿ ಕಲ್ಲಿನಕೋಟೆಯನ್ನು ಕಟ್ಟಿಸಿದ. ಲಾರ್ಡ್ ಕಾರ್ನ್‌ವಾಲೀಸ್ 1791ರಲ್ಲಿ ಬೆಂಗಳೂರನ್ನು ಗೆದ್ದ. ಮುಂದೆ ಇದು ಟಿಪ್ಪುವಿನ ಅಧೀನಕ್ಕೆ ಬಂತು. 1799ರಲ್ಲಿ ಟಿಪ್ಪುವಿನ ನಂತರ ಮೈಸೂರು ಒಡೆಯರ ಆಡಳಿತಕ್ಕೆ ಒಳಪಟ್ಟಿತು. 1831ರಲ್ಲಿ ಬ್ರಿಟಿಷರ ಆಡಳಿತದಲ್ಲಿದ್ದು, 1881ರಲ್ಲಿ ಮತ್ತೆ ಮೈಸೂರು ಒಡೆಯರ ರಾಜಮನೆತನದ ಕೈಸೇರಿತು. ದಕ್ಷಿಣ ಭಾರತದಲ್ಲಿಯೇ ದೊಡ್ಡದಾದ ಸೈನಿಕಠಾಣ್ಯ ದಂಡುಪ್ರದೇಶ ಸ್ವಾತಂತ್ರ್ಯ ಬರುವವರೆಗೆ ಪ್ರತ್ಯೇಕವಾಗಿ ಬ್ರಿಟಿಷರಿಂದ ಆಳಲ್ಪಡುತ್ತಿದ್ದಿತು. 1949ರಲ್ಲಿ ದಂಡು ಮತ್ತು ನಗರಗಳೆರಡನ್ನೂ ಒಂದೇ ನಗರಸಭೆಯ ಅಧೀನಕ್ಕೆ ತರಲಾಯಿತು.
ದಿನದಿನವೂ ಬೆಂಗಳೂರು ಬೃಹದಾಕಾರವಾಗಿ ಬೆಳೆಯುತ್ತಿದೆ. ಎಚ್.ಎಮ್.ಟಿ., ಐ.ಟಿ.ಐ., ಎಚ್.ಎ.ಎಲ್., ಬಿ.ಇ.ಎಲ್., ಭಾರತ್ ಅರ್ತ್ ಮೂವರ್ಸ್ ಇತ್ಯಾದಿ ಬೃಹತ್ ಸಾರ್ವಜನಿಕ ಕಾರ್ಖಾನೆಗಳು, ಪಿಂಗಾಣಿ ಸಾಮಾನು, ಸಾಬೂನು, ವಿದ್ಯುತ್ ಉಪಕರಣಗಳು, ಔಷಧಗಳು, ರೇಡಿಯೋ, ಗಾಜಿನ ಸಾಮಾನು, ತೊಗಲು ಪದಾರ್ಥಗಳು ಪಾದರಕ್ಷೆ, ಬೇಸಾಯದ ಉಪಕರಣಗಳು, ವಸ್ರೋದ್ಯಮ ಮುಂತಾದ ಅನೇಕ ಕೈಗಾರಿಕೆಗಳಿವೆ. ರಸ್ತೆ, ವಿಮಾನ, ರೈಲು ಸಾರಿಗೆ ವ್ಯವಸ್ಥೆಗಳಿವೆ.

ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ರಾಮನ್ ರೀಸರ್ಚ್ ಇನ್‌ಸ್ಟಿಟ್ಯೂಟ್, ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ ಮುಖ್ಯವಾದವು. ಅಲ್ಲದೆ ಇತ್ತೀಚೆಗೆ ಮಾಹಿತಿ ತಂತ್ರಜ್ಞಾನದಲ್ಲಿ ದೈತ್ಯಾಕಾರವಾಗಿ ಬೆಳೆದ ಇನ್‌ಫೋಸಿಸ್, ವಿಪ್ರೋ ಸಹ ಇಲ್ಲಿದೆ. ಲಾಲ್‌ಬಾಗ್, ಕಬ್ಬನ್‌ಪಾರ್ಕ್, ವಿಶ್ವೇಶ್ವರಯ್ಯ ಔದ್ಯೋಗಿಕ ಮತ್ತು ತಾಂತ್ರಿಕ ಮ್ಯೂಸಿಯಂ, ಐತಿಹಾಸಿಕ ವಸ್ತುಸಂಗ್ರಹಾಲಯ, ಕೋಟೆ, ಟಿಪ್ಪುವಿನ ಅರಮನೆ, ಗಾಂಧಿ ಭವನ, ಅಲಸೂರು ಕೆರೆ ಇಲ್ಲಿಯ ಮುಖ್ಯ ಆಕರ್ಷಣೆಗಳು. ಬೆಂಗಳೂರು ನಗರದ ಹೊರವಲಯದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಕೇಂದ್ರವಾದ ಜ್ಞಾನಭಾರತಿ, ಹೆಬ್ಬಾಳದಲ್ಲಿ ಕೃಷಿವಿದ್ಯಾನಿಲಯ ಕೇಂದ್ರವೂ ಇದೆ. ಹಿಂದೆ ಎಲ್ಲ ಮುಖ್ಯ ಕಚೇರಿಗಳಿದ್ದ ಆಠಾರ ಕಚೇರಿ, ರಾಜ್ಯದ ಶ್ರೇಷ್ಠ ನ್ಯಾಯಾಲಯ, ರಾಜ್ಯದ ಕೇಂದ್ರ ಗ್ರಂಥಾಲಯ ಇಲ್ಲಿವೆ. ಬೆಂಗಳೂರಲ್ಲಿ ವಿದ್ಯಾಸಂಸ್ಥೆಗಳು ವಿಪುಲವಾಗಿವೆ.
ಪ್ರಾಚೀನ ಶಿಲ್ಪದ ಕಲಾಶೈಲಿಯನ್ನೂ, ಆಧುನಿಕ ವಾಸ್ತುಶಿಲ್ಪದ ರೀತಿನೀತಿಗಳನ್ನೂ ಮೇಲೈಸಿ ಕಟ್ಟಲಾಗಿರುವ ವಿಧಾನಸೌಧ ಬೆಂಗಳೂರಿಗೆ ತಿಲಕಪ್ರಾಯವಾಗಿದೆ. ಈ ಭವ್ಯಸೌಧ ರಾಜ್ಯದ ಶಾಸನಸಭೆಯ ಮತ್ತು ಆಡಳಿತದ ವಿವಿಧ ಇಲಾಖೆಗಳ ತಾಣವಾಗಿದೆ. ಬೆಂಗಳೂರಿನ ಪುರಭವನ, ರವೀಂದ್ರ ಕಲಾಕ್ಷೇತ್ರ, ಕನ್ನಡಭವನ, ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡಗಳು ಆಕರ್ಷಕವಾಗಿವೆ.

ವಿಕ್ಟೋರಿಯ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಮಿಂಟೋ ಕಣ್ಣಾಸ್ಪತ್ರೆ, ಅಖಿಲ ಭಾರತ ಮಾನಸಿಕ ಆರೋಗ್ಯ ಸಂಸ್ಥೆ, ರಾಜ್ಯದ ಮುಖ್ಯ ಅಂಚೆ ಕಚೇರಿ, ಆಕಾಶವಾಣಿ ಮತ್ತು ಟಿ.ವಿ. ಕೇಂದ್ರಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಪತ್ರಿಕಾಲಯಗಳು 'ಕಾವೇರಿ ಆರ್ಟ್ ಅಂಡ್ ಕ್ರಾಫ್ಟ್ ಎಂಪೋರಿಯಂ' ಮುಂತಾದವು ಬೆಂಗಳೂರಿಗೆ ಮುಕುಟದಂತಿದೆ.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: